ಅಲಂಕಾರಗಳು: ಶಬ್ದಾಲಂಕಾರ

ಮನುಷ್ಯ ಉಡುಗೆ ತೊಡುಗೆಗಳಿಂದ ಹೇಗೆ ತನ್ನ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾನೆಯೋ, ಹಾಗೇಯೇ ಮಾತನಾಡುವಾಗ ಕೇಳುಗರನ್ನು ಆಕರ್ಷಿಸಲು, ಹರ್ಷಿಸಲು, ವಿಷಯವನ್ನು ಮನದಟ್ಟು ಮಾಡಲು ಶಬ್ದಗಳನ್ನು ಕಿವಿಗೆ ಇಂಪಾಗುವಂತೆ, ಅರ್ಥ ಹೆಚ್ಚಿಸುವಂತೆ ಚಮತ್ಕಾರಿಕ ರೀತಿಯಲ್ಲಿ ಬಳಸುವುದು ರೂಡಿ. ಇದಕ್ಕೆ ಭಾಷೆಯ ಅಲಂಕಾರಗಳೆನ್ನುತ್ತಾರೆ. ಅಲಂಕಾರಗಳು ಕಾವ್ಯದ, ಗದ್ಯದ ಸೊಬಗನ್ನು ಹೆಚ್ಚಿಸುವುದಲ್ಲದೆ, ಕೇಳುಗರ ಗಮನವನ್ನು ಸೆಳೆಯುವಂತೆ ಮಾಡುತ್ತದೆ.

ಕಾವ್ಯಗಳಲ್ಲಿ ಕವಿಗಳು ಶಬ್ದಗಳ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದ್ದರೆ ಅಂತಹವನ್ನು 'ಶಬ್ದಾಲಂಕಾರ'ಗಳೆನ್ನುವರು. ಅಲಂಕಾರಿಕ ಮಾತುಗಳು ಅರ್ಥ ಚಮತ್ಕಾರಗಳನ್ನು ಒಳಗೊಂಡಿದ್ದರೆ, ಅವುಗಳಿಗೆ 'ಅರ್ಥಾಲಂಕಾರ'ಗಳೆನ್ನುವರು.

Alankaragalu
ಅಲಂಕಾರ ವಿಧಗಳು

ಶಬ್ದಾಲಂಕಾರಗಳಲ್ಲಿ ಅನುಪ್ರಾಸ, ಯಮಕ ಮತ್ತು ಚಿತ್ರಕವಿತ್ವಗಳೆಂಬ ಮೂರು ವಿಧಗಳಿವೆ.

1. ಅನುಪ್ರಾಸ:

ಪದ್ಯಗಳಲ್ಲಿ ಒಂದೋ ಎರಡೋ ಅಕ್ಷರಗಳು ನಿಯತವಾಗಿ ಮತ್ತೆ ಮತ್ತೆ ಬರುವುದನ್ನು ಅನುಪ್ರಾಸವೆನ್ನುತ್ತಾರೆ. ಅನುಪ್ರಾಸದಲ್ಲಿ ಎರಡು ವಿಧ.

1. ವೃತ್ತ್ಯನುಪ್ರಾಸ: ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಪುನರಾವರ್ತಿತವಾಗಿ ಕಾವ್ಯದ ಸೊಬಗನ್ನು ಹೆಚ್ಚಿಸಿದಲ್ಲಿ ಅದನ್ನು ವೃತ್ತ್ಯನುಪ್ರಾಸವೆನ್ನುತ್ತಾರೆ.

ಉದಾಹರಣೆಗಳು:-

1. "ತುಂಟನಾದವ ಮಂಟಪದಲ್ಲಿ ಕೂತರೂ ತಂಟೆ ಬಿಡಲಾರ."

ಇಲ್ಲಿ 'ಟ್' ವ್ಯಂಜನವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಿರುವುದರಿಂದ, ವಾಕ್ಯದ ಪ್ರಾಸ ಚಮತ್ಕಾರಿಕ ರೀತಿಯಲ್ಲಿದೆ.



2. "ತುಪ್ಪದ ಮಾತಿಗೆ ಒಪ್ಪಿಕೊಂಡು ತಿಪ್ಪೇ ಪಾಲಾದ."

ಇಲ್ಲಿ 'ಪ್' ವ್ಯಂಜನವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಲಾಗಿದೆ.



3.

"ಮುರಾರಿ ಶಂಬರಾರಿ ವಾಗ್ವಾರಾರಿ ನಿರ್ಜರಾರಿತೇ

ಧರಾಧರೇಶ್ವರಾತ್ಮಜೇ ಹರಪ್ರಿಯೇ ಜಯಾಂಬಿಕೆ" - (ವೃಷಬೇಂದ್ರವಿಜಯ)


ಇಲ್ಲಿ 'ರ್' ವ್ಯಂಜನವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಲಾಗಿದೆ.



4.

ಎಳೆಗಿಳಿಗಳ ಬಳಗಂ ಗಳ

ಗಳನಿಳಿ ತಂದೆಳಸಿ ಬಳಸಿ ಸುಳಿದೊಳವುಗುತುಂ

ನಳನಳಿಸಿ ಬೇಳೆದು ಕಳಿಯದ |

ಕಳವೆಯಕಣಿಶಂಗಳಂ ಕರಂ ಖಂಡಿಸುಗುಂ || - (ರಾಜಶೇಖರವಿಳಾಸ)


ಅರ್ಥ: ಎಳೆಯ ಗಿಳಿಗಳ ಸಮೂಹವು ಗಳಗಳನೆ ಇಳಿದು ಬಂದು ಬಯಸಿ ಸುತ್ತುತ್ತಾ, ಸುಳಿಯುತ್ತಾ ನಳನಳಿಸಿ ಬೆಳೆದು ನಿಂತ ಭತ್ತದ ಎಳೆಗಾಳುಗಳ ತೆನೆಗೊನೆಗಳನ್ನು ಸೀಳುತ್ತಿದ್ದವು.


ಇಲ್ಲಿ 'ಳ್' ವ್ಯಂಜನವನ್ನು ಪ್ರತಿ ಸಾಲಿನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬಳಸಲಾಗಿದೆ. ಇಲ್ಲಿ ಕವಿ ಪ್ರಾಸಾಕ್ಷರಗಳನ್ನು ಅರ್ಥವತ್ತಾಗಿ ಬಳಸಿ, ಕಾವ್ಯದ ಮೆರಗನ್ನು ಹೆಚ್ಚಿಸಿ ತನ್ನ ಕಾವ್ಯ ಪ್ರತಿಭೆಯನ್ನು ತೋರ್ಪಡಿಸಿಕೊಂಡಿದ್ದಾನೆ.



2. ಛೇಕಾನುಪ್ರಾಸ: ಒಂದಕ್ಕಿಂತ ಹೆಚ್ಚು ವ್ಯಂಜನಗಳಿಂದ ಕೂಡಿದ ಶಬ್ದದ ಪುನಾರಾವೃತ್ತಿಯನ್ನು ಛೇಕಾನುಪ್ರಾಸವೆನ್ನುತ್ತಾರೆ.

ಉದಾಹರಣೆಗಳು:-

1.

"ಪದ್ಮಗಂಧಿಯ ಪದ್ಮವದನೆಯ ಪದ್ಮಸದ್ಮನಿವಾಸನೆಯ ಪದ

ಪದ್ಮಕರಪದ್ಮಂಗೊಳೊಪ್ಪುವ ಪದ್ಮಲೋಚನೆಯ"


ಇಲ್ಲಿ 'ಪದ್ಮ' ಪದವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಲಾಗಿದೆ.



2. ಹಾಡಿಹಾಡಿ ರಾಗ ಬಂತು, ಉಗುಳಿ ಉಗುಳಿ ರೋಗ ಬಂತು.."

ಇಲ್ಲಿ 'ಹಾಡಿ' ಮತ್ತು 'ಉಗುಳಿ' ಪದಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಲಾಗಿದೆ.



3.

"ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,

ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ" - (ಬಸವಣ್ಣ)


ಇಲ್ಲಿ 'ಮಾಡಿ' ಮತ್ತು 'ನೀಡಿ' ಪದಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಲಾಗಿದೆ.



2. ಯಮಕ:

ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದ, ಪದಭಾಗ ಪದ್ಯದ ಆದಿ, ಮಧ್ಯ ಅಂತ್ಯಸ್ಥಾನಗಳಲ್ಲಿ ಎಲ್ಲಾದರೂ ನಿಯತವಾಗಿ ಬಂದಿದ್ದರೆ ಅದನ್ನು ಯಮಕಾಲಂಕಾರವೆನ್ನುತ್ತಾರೆ.

ಉದಾಹರಣೆಗಳು:-

1.

ಎಳೆವಾಸೆ ತೊಡರ್ದುದೆನೆ ಮಿಸು

ಪೆಳೆವಾಸೆಯದೆಸೆಯೆ ನಿಂದಳಂ ಕೈವಿಡಿದೋ

ಲ್ಹೆಳೆವಾಸೆಯಾಂತನಂಬುಜ

ದೆಳೆವಾಸೆಡೆಗೊಂಡ ಪುಳಿನದೆಡೆಗವನೀಶಂ ||


ಇಲ್ಲಿ 'ಎಳೆವಾಸೆ' ಎಂಬ ಪದವು ಪ್ರತಿ ಸಾಲಿನ ಮೊದಲಿಗೆ ಬಳಸಲಾಗಿದೆ.



2.

ಬರಹೇಳ್ ನಿಕುಂಭನಂ ಶುಂಭನಂ ಜಂಭನಂ |

ಬರಹೇಳ್ ಸಶಬಲನಂ, ಪ್ರಬಲನಂ, ಸುಬಲನಂ |

ಬರಹೇಳ್ ಪ್ರವೀರನಂ, ಘೋರನಂ, ಶೂರನಂ, ಬರಹೇಳ್ ಮಹಾನಾಭನಂ ||

ಬರಹೇಳ್ ನಿಶುಂಭನಂ ಕುಂಭನಂ ಲಂಬನಂ |

ಬರಹೇಳ್ ಮುಹುಂಡನಂ ಮುಂಡನಂ ಹುಂಡಮುಖ್ಯರನೆನುತ್ತುರಿದೆದ್ದನು || - (ಚೆನ್ನಬಸವಪುರಾಣ)


ಸಂದರ್ಭ: ಅಂಧಕಾಸುರನು ಶಿವನ ಮೇಲೆ ಯುದ್ಧಕ್ಕೆ ಹೊರಟಾಗಿನ ಸಂದರ್ಭದ ಒಂದು ಪದ್ಯವಿದು.


ಇಲ್ಲಿ ಎಲ್ಲಾ ಸಾಲುಗಳಲ್ಲಿ ಮೊದಲಿಗೆ 'ಬರಹೇಳ್' ಎಂಬ ನಾಲ್ಕು ವ್ಯಂಜನಗಳ ಪದ ಬಂದಿರುವುದರಿಂದ ಇದು ಯಮಕಾಲಂಕಾರ.



3. ಚಿತ್ರಕವಿತ್ವ

ಕವಿಗಳು ತಮ್ಮ ಭಾಷಾ ಪಾಂಡಿತ್ಯವನ್ನು, ಪ್ರತಿಭೆಯನ್ನು, ಚತುರತೆ, ಬುದ್ಧಿ ಸಾಮರ್ಥ್ಯದ ಪ್ರದರ್ಶನಕ್ಕಾಗಿ, ಶಬ್ದಗಳ ಚಮತ್ಕಾರದಿಂದ ಕೂಡಿರುವ ರಚನೆಗಳನ್ನು ಮಾಡುತ್ತಾರೆ. ಇವುಗಳಲ್ಲಿ ಪ್ರಮುಖವಾಗಿ ಕಾಣುವುದು ಒಂದು ಅಥವಾ ಹೆಚ್ಚು ಅಕ್ಷರಗಳನ್ನು ಮಾತ್ರ ಬಳಸಿ ಸಂಪೂರ್ಣ ಸಾಲುಗಳನ್ನು, ಪದ್ಯಗಳನ್ನು ರಚಿಸಲಾಗುತ್ತದೆ. ಇದಲ್ಲದೇ ಅಕ್ಷರಗಳ ಜೋಡಣೆಯನ್ನು ಚತುರತೆಯಿಂದ ಬಳಸಿ ಪದ್ಯಗಳನ್ನು ರಚಿಸಲಾಗುತ್ತದೆ.

ಏಕಾಕ್ಷರಿ, ದ್ಯಯಕ್ಷರಿ, ತ್ರಯಕ್ಷರಿ, ಗತಪ್ರತ್ಯಾಗತ, ಅತಾಲವ್ಯ, ನಿರೋಷ್ಯೃ ಮುಂತಾದ ಭೇದಗಳು ಚಿತ್ರಕವಿತ್ವದಲ್ಲಿವೆ.

1. ಏಕಾಕ್ಷರಿ: ಒಂದೇ ಅಕ್ಷರದ ಪ್ರಯೋಗ

ಉದಾಹರಣೆ:-

ನಿನ್ನನ್ನಂ ನಿನ್ನನ್ನೆಂ

ನಿನ್ನಾಂನು ನನನ್ನ ನಿನ್ನ ನನ್ನಂ ನಿನ್ನಂ

ನಿನ್ನನ್ನಾಂ ನಾಂ ನೀನೆನೆ

ನಿನ್ನನ್ನಂ ನನ್ನಿ ನಿನ್ನನಾನಿನನೆನ್ನೆಂ ||


ಇಲ್ಲಿ 'ನ್' ಎಂಬ ವ್ಯಂಜನವನ್ನು ಪದೇ ಪದೇ ಬಳಸಿ, ಅರ್ಥಕ್ಕನುಸಾರವಾಗಿ ಪದಗಳನ್ನಾಗಿಸಲಾಗಿದೆ.



2. ದ್ವಯಕ್ಷರಿ: ಎರಡು ಅಕ್ಷರಗಳಲ್ಲಿ ರಚಿತವಾದುದು

ಉದಾಹರಣೆ:-

ಮಾನಿನೀ ಮುನ್ನಮಾಂ ನೀನೇ

ನೀನಾ ನಿನ್ನದು ಮಾನಮೇಂ

ಮಾನಮಾನಾನೆ ಮುನ್ನನ್ನೈ

ಮಾನಮಾನಿನ ಮುನ್ನಿನಾ ||


ಇಲ್ಲಿ 'ಮಾನ' ಎಂಬ ಎರಡಕ್ಷರದ ಪದವನ್ನು ಪದೇ ಪದೇ ಬಳಸಿ, ಅರ್ಥಕ್ಕನುಸಾರವಾಗಿ ಪದಗಳನ್ನಾಗಿಸಲಾಗಿದೆ.



3. ತ್ರಯಕ್ಷರಿ: ಮೂರು ಅಕ್ಷರಗಳಲ್ಲಿ ರಚಿತವಾದುದು

ಉದಾಹರಣೆ:-

ನನ್ದನ ನನ್ದನ ನಿನ್ನೊ

ನ್ದನ್ದದ ಮೈಮುನ್ದೆ ನಿನ್ದುದೆನ್ದೆನೆ ಮುದದಿ

ನ್ದನ್ದಿನ್ದುನ್ದೆನ್ನದೆ ನೀ

ನೆನ್ದುಂ ಮನ್ಮನದೆ ನೆಮ್ಮೆ ನಿನ್ದೀಮುದಮಂ ||


ಇಲ್ಲಿ 'ನನ್ದನ್' ಎಂಬ ಮೂರಕ್ಷರದ ಪದವನ್ನು ಪದೇ ಪದೇ ಬಳಸಿ, ಅರ್ಥಕ್ಕನುಸಾರವಾಗಿ ಪದಗಳನ್ನಾಗಿಸಲಾಗಿದೆ.



4. ಗತಪ್ರತ್ಯಾಗತ :

ಪದ್ಯದ ಪ್ರಾರಂಭ ಮತ್ತು ಅಂತ್ಯ ಎರಡು ಒಂದೇ ತೆರನಾದ ಅಕ್ಷರಗಳಿಂದ ರೂಪುಗೊಂಡಿದ್ದರೆ ಅದು ಗತಪ್ರತ್ಯಾಗತ ಅಲಂಕಾರವಾಗುತ್ತದೆ. ಇಂತಹ ಪದ್ಯಗಳ ಬರವಣಿಗೆ ಕಠಿಣವಾಗಿದ್ದು, ಇದು ಬಹಳ ಕಡಿಮೆ ಕಾವ್ಯಗಳಲ್ಲಿ ಕಂಡುಬರುತ್ತದೆ. ಇಂತಹ ಪದ್ಯಗಳು ಕವಿಯ ಭಾಷಾ ಪಾಂಡಿತ್ಯವನ್ನು, ಪ್ರತಿಭೆಯನ್ನು, ಚತುರತೆಯನ್ನು ತೊರ್ಪಡಿಸುತ್ತದೆ.

ಉದಾಹರಣೆ:-

ಕುಂದಿನಿಂದೆಚ್ಚನದು ಬಂ

ಟಿಂದಮಲ್ಲದೆ ನಿಂದುಂದೆಂ

ದೆಂದುನಿಂದೆಲ್ಲಮದಟಿಂ

ಬಂದು ನಚ್ಚದೆ ನಿಂದಿಕುಂ ||


ಈ ಪದ್ಯದ ನಾಲ್ಕನೇ ಸಾಲಿನ ಕೊನೆಯಿಂದ ತಿರುಗಿ ಓದಿದಾಗ ಮೊದಲಿನ ಎರಡು ಸಾಲುಗಳು ಪುನರಾವರ್ತನೆಯಾಗುತ್ತದೆ.



ಸಾರಾಂಶ

  • ಕಾವ್ಯಗಳಲ್ಲಿ ಕವಿಗಳು ಶಬ್ದಗಳ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದ್ದರೆ ಅಂತಹವನ್ನು 'ಶಬ್ದಾಲಂಕಾರ'ಗಳೆನ್ನುವರು
  • ಪದ್ಯಗಳಲ್ಲಿ ಒಂದೋ ಎರಡೋ ಅಕ್ಷರಗಳು ನಿಯತವಾಗಿ ಮತ್ತೆ ಮತ್ತೆ ಬರುವುದನ್ನು ಅನುಪ್ರಾಸವೆನ್ನುತ್ತಾರೆ
  • ಅನುಪ್ರಾಸದಲ್ಲಿ ಎರಡು ವಿಧ: ವೃತ್ತ್ಯನುಪ್ರಾಸ ಮತ್ತು ಛೇಕಾನುಪ್ರಾಸ:
  • ಒಂದಾಗಲಿ, ಎರಡಾಗಲಿ ವ್ಯಂಜನಗಳು ಪುನಃ ಪುನಃ ಬಂದು ಕಾವ್ಯದ ಸೊಬಗನ್ನು ಹೆಚ್ಚಿಸಿದಲ್ಲಿ ಅದನ್ನು ವೃತ್ತ್ಯನುಪ್ರಾಸವೆನ್ನುತ್ತಾರೆ
  • ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದದ ಪುನಾರಾವೃತ್ತಿಯನ್ನು ಛೇಕಾನುಪ್ರಾಸವೆನ್ನುತ್ತಾರೆ.
  • ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದ, ಪದಭಾಗ ಪದ್ಯದ ಆದಿ, ಮಧ್ಯ ಅಂತ್ಯಸ್ಥಾನಗಳಲ್ಲಿ ಎಲ್ಲಾದರೂ ನಿಯತವಾಗಿ ಬಂದಿದ್ದರೆ ಅದನ್ನು ಯಮಕಾಲಂಕಾರವೆನ್ನುತ್ತಾರೆ.
  • ಚಿತ್ರಕವಿತ್ವದಲ್ಲಿ ಒಂದು ಅಥವಾ ಹೆಚ್ಚು ಅಕ್ಷರಗಳನ್ನು ಮಾತ್ರ ಬಳಸಿ ಸಂಪೂರ್ಣ ಸಾಲುಗಳನ್ನು, ಪದ್ಯಗಳನ್ನು ರಚಿಸಲಾಗುತ್ತದೆ. ಇದಲ್ಲದೇ ಅಕ್ಷರಗಳ ಜೋಡಣೆಯನ್ನು ಚತುರತೆಯಿಂದ ಬಳಸಿ ಪದ್ಯಗಳನ್ನು ರಚಿಸಲಾಗುತ್ತದೆ
  • ಏಕಾಕ್ಷರಿ, ದ್ಯಯಕ್ಷರಿ, ತ್ರಯಕ್ಷರಿ, ಗತಪ್ರತ್ಯಾಗತ, ಅತಾಲವ್ಯ, ನಿರೋಷ್ಯೃ ಮುಂತಾದ ಭೇದಗಳು ಚಿತ್ರಕವಿತ್ವದಲ್ಲಿವೆ.